About Us
ದತ್ತ ದಿಗಂಬರ ಗುರು ಪರಂಪರೆಯ ಸೊಂತ ಕ್ಷೇತ್ರದ ಪರಿಚಯ
ವಿಶ್ವದಲ್ಲಿಯೇ ನಮ್ಮ ಭರತ ಭೂಮಿಯು ಸಾಧುಸಂತರು, ಪುಣ್ಯಪುರುಷರು, ಮಹಾತ್ಮರ ಹಾಗೂ
ಹಾಗೂ ಪವಾಡ ಪುರುಷರ ತವರೂರು ಎಂದೆನಿಸಿಕೊಂಡಿದೆ. ಇಲ್ಲಿರುವ ನೆಲ, ಜಲ, ಶಿಲೆಗಳು ಸಹಿತ
ಪರಬ್ರಹ್ಮನ ಸ್ವರೂಪವಾಗಿ ಆಸ್ತಿಕ್ಯ ಮನೋಭಾವನೆಯ ಹೃದಯ ದೇಗುಲಗಳಾಗಿವೆ. ಅದರೊಂದಿಗೆ ಶರಣರ ನಾಡು ಕೂಡಾ ಅತ್ಯಂತ ಪಾವನ ಭೂಮಿಯಾಗಿದೆ. ಇಲ್ಲಿ ಅನೇಕ ಶರಣರು,ದಾರ್ಶನಿಕರು, ಸಂತರು ಸಾಕ್ಷಾತ ಭಗವಂತನ ಸ್ವರೂಪವಾಗಿ ಧರೆಗಿಳಿದ್ದಾರೆ. ಹಾಗೆ ಅವತರಿಸಿ ಅನೇಕಾನೇಕ ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿ ತಮ್ಮ ತಪಃಶ್ಯಕ್ತಿ ಹಾಗೂ ಜ್ಞಾನಶಕ್ತಿಗಳ ಮೂಲಕ ಮನುಕುಲವನ್ನು ಉದ್ಧರಿಸುತ್ತ ಬಂದಿದ್ದಾರೆ. ಇಂತಹ ಮಹಾತ್ಮರ ಸಾಲಿನಲ್ಲಿ ಯೋಗಿವರೇಣ್ಯ ಸದ್ಗುರು ಶ್ರೀ ದಿಗಂಬರ ಮಾಣಿಕನಾಥರೂ ಒಬ್ಬರಾಗಿದ್ದರು. ಮಹಾಯೋಗಿಗಳಾದ ಶ್ರೀ ಮಾಣಿಕನಾಥ ಮಹಾರಾಜರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಯರನಳ್ಳಿ ಎಂಬ ಗ್ರಾಮದ ಪ್ರತಿಷ್ಠಿತ ಮನೆತನದ ವೀರಸಂಗಪ್ಪ ಹಾಗೂ ವೀರಸಂಗವ್ವ ದಂಪತಿಗಳ ಪುಣ್ಯಗರ್ಭದಲ್ಲಿ ೧೯೦೧ ರಲ್ಲಿ ಜನ್ಮ ತಾಳಿದರು. ಅವರು ಲೌಕಿಕ ಪ್ರಪಂಚದಲ್ಲಿ ಇದ್ದೂ ಇಲ್ಲದಂತೆ ಜೀವನ ನಡೆಸಿ, ಪೂರ್ವಜನ್ಮದ ಸುಕೃತ ಪುಣ್ಯದಿಂದ ಭಗವಂತನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿ ಲೌಕಿಕ ಪ್ರಪಂಚದಿಂದ ವಿಮುಕ್ತಿಗೊಂಡು ದಿಗಂಬರಾವಸ್ಥೆಗೆ ಬಂದು ಉನ್ಮತ್ತಾವಸ್ಥೆಗೆ ತಲುಪಿದರು. ಈ ಅವಧಿಯಲ್ಲಿ ಅವರು ಕಠಿಣ ತಪಶ್ಚರ್ಯಗಳ ಮೂಲಕ
ಹಟಯೋಗದೊಂದಿಗೆ ಸಾಧನೆಗಳನ್ನು ಮಾಡಿ ಹಲವಾರು ಸಾದೃಶ ಪವಾಡಗಳನ್ನು ತೋರಿದರು.
ತಮ್ಮ ಯೋಗ ಜೀವನವನ್ನು ಮುಂದುವರೆಸಿ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮಕ್ಕೆ ಬಂದು ಅಲ್ಲಿಯ ಬೆಟ್ಟದಲ್ಲಿ ಬಹುಕಾಲ ವಾಸಿಸಿ, ಬರುವ ಭಕ್ತರ ಕಷ್ಟಕಾರ್ಪಣ್ಯಗಳನ್ನು ತಮ್ಮ ಉಗ್ರ ತಪಸ್ಸಿನ ಮೂಲಕ ಭಕ್ತರ ಭವರೋಗವನ್ನು ದಹಿಸಿದರು. ಅವತಾರ ಸಮಾಪ್ತಿಯ ಸಂದರ್ಭದಲ್ಲಿ ಮಾಣಿಕನಾಥರಿಗೆ ಆಕಸ್ಮಿಕವಾಗಿ ಅಗ್ನಿ ಸ್ಪರ್ಶವಾದಾಗ ದೇಹಭಾವನೆಯನ್ನೇ ಮರೆತು, ತಮ್ಮನ್ನೇ ತಾವು ದಹಿಸಿಕೊಂಡರೂ ವಿಚಲಿತಗೊಳ್ಳದೆ ಮಹಾದೇವನ ಪಾದಕಮಲಗಳಲ್ಲಿ ಚಚೈತ್ರ ಶುದ್ಧ ನವಮಿಯ ‘ರಾಮ ನವಮಿ’ ಯ ಪರ್ವ ದಿನದಂದು ಲೀನವಾದರು. ಅವರ ಜೀವಿತಾವಧಿಯಲ್ಲಿಯೇ ಸದ್ಗುರುಗಳ ಕರಕಮಲ ಸಂಜಾತರಾದ ವಿಶ್ವಬ್ರಾಹ್ಮಣ ಕುಲದ ಬೀದರ ಜಿಲ್ಲೆ ಹಣಕುಣಿ ಗ್ರಾಮದ ಶ್ರೀ ಶಂಕರಲಿಂಗ ಮಹಾರಾಜರಿಗೆ ಅನುಗ್ರಹ ನೀಡಿ ತತ್ ಸ್ವರೂಪರನ್ನಾಗಿ ಮಾಡಿಕೊಂಡು ದಿಗಂಬರ ಪರಂಪರೆಯನ್ನು ಮಂದುವರೆಸಲು ಸೂಚಿಸಿದ್ದರು.
ಶಿಷ್ಯರಾದ ದಿಗಂಬರ ಶ್ರೀ ಶಂಕರಲಿಂಗ ಮಹಾರಾಜರು ಗುರುಗಳನ್ನು ಕಳೆದುಕೊಂಡ ದುಃಖದಲ್ಲಿ ಪರಿತಪಿಸುತ್ತ ಘೋರಾರಣ್ಯದಲ್ಲಿ ಸಂಚರಿಸುತ್ತ ಈಗಿರುವ ಮುಲ್ಲಾಮಾರಿ ತೀರದಲ್ಲಿರುವ ಸೊಂತ ಗ್ರಾಮದಲ್ಲಿ ನೆಲೆನಿಂತು ಸದ್ಗುರುವಿನ ಅಪ್ಪಣೆಯಂತೆ ದತ್ತ ದಿಗಂಬರ ಮಾಣಿಕನಾಥರ ಪುಣ್ಯಾಶ್ರಮವನ್ನು ನಿರ್ಮಿಸಿದರು. ಸುಮಾರು ಮೂರು ದಶಕಗಳ ಕಾಲ ಗುರು ಸ್ಮರಣೆಯಲ್ಲಿ ಕ್ಷೇತ್ರವನ್ನು ಉನ್ನತ ಮಹೋನ್ನತ ಆಧ್ಯಾತ್ಮ ಕೇಂದ್ರವನ್ನಾಗಿ ಬೆಳೆಸಿ, ಅನೇಕ ಪವಾಡಗಳನ್ನು ಮಾಡುತ್ತ ಭಕ್ತರನ್ನು ಉದ್ಧರಿಸುತ್ತ ಶ್ರೀಕ್ಷೇತ್ರವನ್ನು ಪಾವನ ಕ್ಷೇತ್ರವನ್ನಾಗಿ ಮಾಡಿದರು. ಅವರ ಅವತಾರ ಸಮಾಪ್ತಿಯ ಕಾಲದಲ್ಲಿ ಅನಾರೋಗ್ಯದಿಂದ ಅಸ್ವಸ್ಥರಾದಾಗ, ಭಕ್ತರ ಆರ್ತ ಮೊರೆ ಕೇಳಿದ ಪೂಜ್ಯರು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಗುರುನಾಥನೇ ಬಂದು ಮಾರ್ಗದರ್ಶನ ನೀಡುತ್ತಾನೆಂದು ಹೇಳಿ ಸದ್ಗುರುವಿನ ಅಪ್ಪಣೆಯಂತೆ ದಿನಾಂಕ 25.08.1998 ರಂದು ಮಂಗಳವಾರ ತಮ್ಮ ಯೋಗ ಜೀವನವನ್ನು ಶ್ರೀ ಗುರುಗಳ ಪಾದಕಮಲದಲ್ಲಿ ಲೀನಗೊಳಿಸಿ ಅಮರರಾದರು.
*
ತದನಂತರ ಆಶ್ರಮದಲ್ಲಿ ದಿಗಂಬರ ಪರಂಪರೆಯ ಉತ್ತರಾಧಿಕಾರಿಗಳು ಇಲ್ಲದಂತಾಗಿ ಭಕ್ತಾದಿಗಳು ಪರಿತಪಿಸುತ್ತಿದ್ದಾಗ ಅವರ ಮೊರೆಯನ್ನು ದೇವರು ಕೇಳಿದನೋ ಎಂಬಂತೆ ಹಿಂದೆ ಶ್ರೀ ಶಂಕರಲಿಂಗ ಮಹಾರಾಜರು ಹೇಳಿದಂತೆ ಕ್ಷೇತ್ರಕ್ಕೆ ಭೂಮಿಯನ್ನು ನೀಡಿದ ಪುಣ್ಯದಂಪತಿಗಳಾದ ಶ್ರೀ ಶರಣ ಸಿದ್ದಣ್ಣ ಹಾಗೂ ನಾಗಮ್ಮ ದಂಪತಿಗಳ ಪುಣ್ಯಗರ್ಭದಲ್ಲಿ ಜನಿಸಿದ ‘ಶರಣಕುಮಾರ’ ಎಂಬ ಹನ್ನೊಂದು ವರುಷದ ಪುಣ್ಯಪುರುಷನಾದ ಬಾಲಕನ ಕೆಲವೊಂದು ಅವಸ್ಥೆಗಳನ್ನು ಗುರುತಿಸಿದ ಯಾದಗಿರಿ/ ಕಲಬುರ್ಗಿ ವಿಶ್ವಕರ್ಮ ಏಕದಂಡಿಗಿ ಪೀಠಾಧೀಶರಾದ ಯತಿವರೇಣ್ಯ ಪರಮಪೂಜ್ಯ ಶ್ರೀ ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿಗಳು ಅನೇಕ ಪರೀಕ್ಷೆಗಳನ್ನು ನಡೆಸಿ, ಈ ಪರಂಪರೆಗೆ ಯೋಗ್ಯ ಉತ್ತರಾಧಿಗಳೆಂದು ಪರಿಗಣಿಸಿ ೨೦೦೩ ರಲ್ಲಿ ‘ಗುರುದೀಕ್ಷೆ’ ಯನ್ನು ಕರುಣಿಸಿದರು. ಗುರುದೀಕ್ಷೆ ಪಡೆದ ಶರಣನಿಗೆ ‘ಶರಣ ಶಂಕರಲಿಂಗ’ ಎಂಬ ನಾಮಧೇಯವನ್ನು ನೀಡಿ ದಿಗಂಬರ ಪರಂಪರೆಯ ಆಚಾರ, ವಿಚಾರಗಳನ್ನು ಭೋಧಿಸಿ, ಪೀಠವನ್ನು ಮುಂದುವರೆಸಿಕೊಂಡು ಹೋಗಲು ಸೂಚನೆ ನೀಡಿದರು. ಮುಂದೆ ಬಾಲಕರಾದ ದಿವ್ಯ ತೇಜೋಮೂರ್ತಿಯಾದ ಶರಣ ಶಂಕರಲಿಂಗ ಮಹಾರಾಜರು ತ್ರೈಶಕ್ತಿಯ ಸ್ವರೂಪವಾಗಿ ಅಷ್ಟಾಂಗ ಯೋಗಗಳನ್ನು ಸಾಧಿಸಿಕೊಂಡು ಸಾಕ್ಷಾತ ಪರಮ ಗುರುಗಳಾದ ದತ್ತ ದಿಗಂಬರ ಮಾಣಿಕನಾಥ ಮಹಾರಾಜರ ಅವತಾರ ಪುರುಷರೆಂದೇ ಪ್ರಖ್ಯಾತಿಯನ್ನು ಪಡೆದರು.
*
ಕ್ಷೇತ್ರದ ಅಧಿಕಾರವನ್ನು ಬಾಲ್ಯದಲ್ಲಿಯೆ ವಹಿಸಿಕೊಂಡ ನಂತರ ಯೋಗಿ ಶರಣ ಶ್ರೀ ಶಂಕರಲಿಂಗ ಮಹಾರಾಜರು ಅನೇಕ ಸಾಧನೆಗಳನ್ನು ಮಾಡಿ, ಗುರುಗಳ ಆದೇಶದಂತೆ ದುರ್ಗಮ ಪ್ರದೇಶಗಳಲ್ಲಿ
ಕಠಿಣ ಅನುಷ್ಠಾನಗಳನ್ನು ಕೈಗೊಂಡು ಆತ್ಮೋನ್ನತಿಯೊಂದಿಗೆ, ಲೋಕ ಕಲ್ಯಾಣಾರ್ಥ ಭಕ್ತರ ಉದ್ಧಾರಕ್ಕಾಗಿ ತಮ್ಮ ಯೋಗ ಜೀವನವನ್ನು ಸಮರ್ಪಿಸಿ ಶ್ರೀಕ್ಷೇತ್ರವನ್ನು ಉನ್ನತ ಸ್ಥಿತಿಗೆ ತಂದಿದ್ದಾರೆ.
ಆಶ್ರಮದಲ್ಲಿ ಶಿಕ್ಷಣ ಸಂಸ್ಥೆ, ಗೋಶಾಲೆ, ವೃದ್ಧಾಶ್ರಮ, ಹಾಗೂ ವೇದ ಪಾಠಶಾಲೆಗಳನ್ನು ಸ್ಥಾಪಿಸಿ ಜನಸಾಮಾನ್ಯರ, ದೀನದಲಿತರ ಆಶ್ರಯದಾತರಾಗಿದ್ದಾರೆ. ಅವರು ಕೈಗೊಂಡ ಕಲ್ಯಾಣ ಕಾರ್ಯಗಳು ಜನಮಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ವರ್ಷವಿಡೀ ಈ ಆಶ್ರಮದಲ್ಲಿ ನಡೆಯುವ ಪುಣ್ಯಾರಾಧನೆಗಳು ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನಾಡಿನ ಹರಗುರುಚರ ಮೂರ್ತಿಗಳ ಸನ್ನಿಧಾನದಲ್ಲಿ ಸಾಧಕರ, ಸಮಾಜ ಸೇವಕರ, ರಾಜಕೀಯ ಧುರೀಣರ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿದ್ದಾರೆ. ಆರೋಗ್ಯ ತಪಾಸಣೆಗಳಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರ ಕಾರುಣ್ಯಮೂರ್ತಿಯಾಗಿದ್ದಾರೆ, ಜೊತೆಗೆ ಶ್ರೀಕ್ಷೇತ್ರದಲ್ಲಿ ಭಕ್ತರ ವಸತಿಗಾಗಿ ಯಾತ್ರಿನಿವಾಸ, ನಿತ್ಯ ಅನ್ನಸಂತರ್ಪಣೆ, ಗುರುಭವನಗಳಂತಹ ಆಧುನಿಕ ಕಟ್ಟಡಗಳನ್ನು ನಿರ್ಮಿಸಿ ಸಾಧನೆಗಳ ಸಾಕಾರ ಮೂರ್ತಿಯಾಗಿದ್ದಾರೆ. ಅತ್ಯಲ್ಪ ಅವಧಿಯಲ್ಲಿಯೇ
ಈ ಪುಣ್ಯಾಶ್ರಮವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಪಸರಿಸುವಂತೆ ಮಾಡಿ ಸರ್ವ ಧರ್ಮಗಳ ಆರಾಧ್ಯ ಮೂರ್ತಿಯಾಗಿದ್ದಾರೆ. ಇತ್ತೀಚೆಗೆ ಪರಮ ಗುರುಗಳಾದ ದತ್ತ ದಿಗಂಬರ ಮಾಣಿಕನಾಥ ಮಹಾರಾಜರ ಯೋಗ ಸಮಾಧಿಯಾದ ಕಲ್ಮೂಡ ಕ್ಷೇತ್ರಕ್ಕೂ ಸಹ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ದಿಶೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಹಗಲಿರುಳು ಅವಿಶ್ರಾಂತವಾಗಿ ಭಕ್ತರ ಉದ್ಧಾರಕ್ಕಾಗಿ ತಮ್ಮ ಅಮೂಲ್ಯ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ತ್ರೈಮೂರ್ತಿಗಳ ಇಚ್ಛಾಶಕ್ತಿ ಹಾಗೂ ಪೂಜ್ಯರ ಸತ್ಸಂಕಲ್ಪದಂತೆ ಕ್ಷೇತ್ರದಲ್ಲಿ ಭವ್ಯರಥವನ್ನು ನಿರ್ಮಿಸಿ,
ತಮ್ಮ ಸದ್ಗುರುಗಳ ಚರಣಗಳಿಗೆ ಸಮರ್ಪಿಸುವ ಸದುದ್ದೇಶದಿಂದ ಒಂದು ನೂರಾ ಒಂದು ಗ್ರಾಮಗಳಲ್ಲಿ ಶ್ರೀ ಶರಣಬಸವೇಶ್ವರ ಪುರಾಣವನ್ನು ಸಂಸ್ಥಾನದ ಶ್ರೀ ಶರಣಕುಮಾರ ಶಾಸ್ತ್ರಿ ಇವರ ಅಸ್ಖಲಿತ ವಾಣಿಯಿಂದ ಹಮ್ಮಿಕೊಂಡು ಜನಜಾಗೃತಿಯ ಜೊತೆಗೆ ಆಸ್ತಿಕ್ಯ ಮನೋಭಾವನೆಯೊಂದಿಗೆ ವ್ಯಸನಮುಕ್ತ ಗ್ರಾಮಗಳನ್ನಾಗಿ ಮಾಡಿದ ಸತ್ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಇವರ ಸಂಕಲ್ಪದಂತೆ ನಿರ್ಮಾಣವಾಗುತ್ತಿರುವ ಬೃಹತ ರಥವು ಅಂದಾಜು ಐವತ್ತಾರು ಅಡಿ ಎತ್ತರದ್ದಾಗಿದ್ದು ಸುಮಾರು ಎರಡೂವರೆ ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿರುತ್ತದೆ. ಈ ರಥದ ನಿರ್ಮಾಣಕ್ಕಾಗಿ ಭಕ್ತರ ಸಹಾಯ ಸಹಕಾರದೊಂದಿಗೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಜಯಶ್ರೀ ಮತ್ತಿಮೂಡ,
ಮತ್ತು ಬೀದರ ಗ್ರಾಮೀಣ ಕ್ಷೇತ್ರದ ಶಾಸಕರಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಹುಮನಾಬಾ ಕ್ಷೇತ್ರದ ಶಾಸಕರಾದ ಶ್ರೀ ಸಿದ್ಧಲಿಂಗಪ್ಪ ಪಾಟೀಲ ಅವರುಗಳು ಈ ಬೃಹತ್ಕಾರ್ಯಕ್ಕೆ ಮತ್ತು ಜೀರ್ಣೋದ್ಧಾರಕ್ಕೆ ಅನೇಕ ರೀತಿಯ ಸೇವೆಯನ್ನು ಸಮರ್ಪಿಸಿ ಕೃತಾರ್ಥರಾಗಿದ್ದಾರೆ. ಈ ಎಲ್ಲ ಮಹನೀಯರೊಂದಿಗೆ ಅಸಂಖ್ಯಾತ ಸದ್ಭಕ್ತ ಸ್ತೋಮ ಪುಣ್ಯಕಾರ್ಯಕ್ಕೆ ಕೈಜೋಡಿಸಿದ್ದಾರೆ.
*
ಉಡುಪಿಯ ವಿಶ್ವಬ್ರಾಹ್ಮಣ ಕಾಷ್ಠಶಿಲ್ಪಿಗಳಾದ, ಅಂತರ್ರಾಷ್ಟ್ರೀಯ ಪ್ರಖ್ಯಾತಿ ಪಡೆದ, ಕುಂಭಾಶಿಯ
ಬ್ರಹ್ಮಶ್ರೀ ರಾಜಗೋಪಾಲಾಚಾರ್ಯ ಇವರಿಂದ ನಿರ್ಮಾಣಗೊಂಡಿರುವ ಭವ್ಯ ರಥವು ಬರುವ ಮಾಘಶುದ್ಧ ಪಂಚಮಿ ದಿನಾಂಕ 11.02.2027 ರಂದು ಗುರುವಾರದ ಶುಭದಿನದಂದು
ಲೋಕಾರ್ಪಣೆಗೊಳ್ಳಲಿದೆ. ರಥೋತ್ಸವದ ಪೂರ್ವಭಾವಿಯಾಗಿ ದಿನಾಂಕ ೨೨/೦೧.೨೦೨೭ ಶುಕ್ರವಾರದಿಂದ ಸುಕ್ಷೇತ್ರ ಸೊಂತದಲ್ಲಿ ಅನೇಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ದೇಶದ ಪ್ರಖ್ಯಾತ ಸಾಧುಸಂತರು, ದಾರ್ಶನಿಕರು, ಶಿಕ್ಷಣ ತಜ್ಞರು, ಸಮಾಜ ಸೇವಾಕರ್ತರು, ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರದ ಮಂತ್ರಿಗಳು ಭಾಗವಹಿಸಿ ಶೋಭೆಯನ್ನು ನೀಡಲಿದ್ದಾರೆ. ಸುಮಾರು ದಿನಗಳಿಂದ ಶ್ರೀಕ್ಷೇತ್ರದಲ್ಲಿರುವ ಸೇವಾಧಾರಿಗಳ ಅವಿರತ ಪರಿಶ್ರಮದಿಂದ ಸಾಕಾರಗೊಳ್ಳುತ್ತಿರುವ ಈ ಕಾರ್ಯಕ್ರಮದಲ್ಲಿ ಸದ್ಭಕ್ತಾದಿಗಳು ಪಾಲ್ಗೊಂಡು ಸದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.
– ಸನ್ಮಂಗಳಾನಿಭವಂತು –
– ಸುಕ್ಷೇತ್ರ ಸೊಂತ ಪುಣ್ಯಾಶ್ರಮದ ಸೇವಾಧಾರಿಗಳು